ಗೊನೋರಿಯ-
ನೈಸೀರಿಯ ಗಾನರೀಯೀ ಎಂಬ ಏಕಾಣುಜೀವಿಯಿಂದ ಉಂಟಾಗುವ ಒಂದು ತೆರನ ಗುಹ್ಯರೋಗ. ಅಂಟುರೋಗವೂ ಹೌದು. ರೋಗಗ್ರಸ್ತ ಅಂಗಗಳಲ್ಲಿ ಕೀವು ಸ್ರವಿಸುವುದು ಇದರ ಮುಖ್ಯ ಗುಣ. ಮೂತ್ರನಾಳಗಳಿಂದ ಹೊರಸೂಸುವ ಕೀವು ವೀರ್ಯವೆಂದೂ ಹೀಗೆ ಹೊರಸೂಸಲು ಶುಕ್ಲಗ್ರಂಥಿಯ ದೋಷವೇ ಕಾರಣವೆಂದು ಬಗೆದು ಗೊನೋರಿಯವನ್ನು ಶುಕ್ಲದೋಷವೆಂಬ ಹೆಸರಿನಿಂದ ಕರೆಯುವುದುಂಟು. ಮನುಷ್ಯರಲ್ಲಿ ಮಾತ್ರ ಈ ರೋಗ ಸಹಜವಾಗಿ ಕಾಣಿಸುತ್ತದೆ. ಬೇರಾವ ಪ್ರಾಣಿಗಳಲ್ಲೂ ಕಂಡುಬರುವುದಿಲ್ಲ. ಆದರೆ ಪ್ರಯೋಗಶಾಲೆಗಳಲ್ಲಿ ಕೋತಿ, ಮೊಲ ಮುಂತಾದವಕ್ಕೆ ಈ ರೋಗ ಅಂಟುವಂತೆ ಮಾಡಬಹುದು. ಸಾಮಾನ್ಯವಾಗಿ ಗಂಡಸರಲ್ಲಿ ಮೂತ್ರನಾಳದಲ್ಲಿಯೂ ಹೆಂಗಸರಲ್ಲಿ ಹೆಚ್ಚಾಗಿ ಗರ್ಭಕೋಶಕಂಠ (ಸೆರ್ವಿಕ್ಸ್) ಇಲ್ಲವೆ ಮೂತ್ರನಾಳದಲ್ಲಿಯೂ ಕಾಣಿಸಿಕೊಳ್ಳುತ್ತದೆ.

	ರೋಗ ಚರಿತ್ರೆ: ಪುರಾತನ ಕಾಲದಿಂದಲೂ ಮಾನವನಿಗೆ ತಿಳಿದಿದ್ದ ಮೇಹ ರೋಗವಿದು. ಚೀನೀಯರಿಗೆ 5,000 ವರ್ಷಗಳ ಹಿಂದೆಯೇ ಇದರ ಬಗ್ಗೆ ಗೊತ್ತಿತ್ತು. ಪ್ರಾಚೀನ ಗ್ರೀಕರಿಗೆ, ರೋಮನರಿಗೆ, ಅರಬ್ಬರಿಗೆ, ಇದರ ಪರಿಚಯ ಇತ್ತು. ಆದರೆ ಈ ರೋಗ ಲೈಂಗಿಕ ಸಂಬಂಧವಾದುದು ಎಂಬುದು ಬಹಳ ಕಾಲ ಗೊತ್ತಿರಲಿಲ್ಲ. ಅಲ್ಲದೆ ಇದನ್ನು ಇನ್ನೊಂದು ಬಗೆಯ ಮೇಹರೋಗವಾದ ಸಿಫಿಲಿಸ್ ಎಂಬುದರ ಒಂದು ಬಗೆಯೆಂದು ತಿಳಿಯಲಾಗಿತ್ತು. 1831ರ ಅನಂತರ ಇವೆರಡೂ ಭಿನ್ನ ಬಗೆಯ ರೋಗಗಳೆಂದು ಪತ್ತೆ ಹಚ್ಚಲಾಯಿತು. ಜರ್ಮನಿಯ ವೈದ್ಯ ನೈಸರ್ ಗೊನೋರಿಯ ರೋಗಕಾರಕ ಕ್ರಿಮಿಯನ್ನು 1884ರಲ್ಲಿ ಕಂಡುಹಿಡಿದ ಅನಂತರ ಈ ರೋಗ ಸಿಫಿಲಿಸ್ ರೋಗದಿಂದ ಭಿನ್ನವಾದುದೆಂದು ಖಚಿತವಾಯಿತು.

	ರೋಗ ನಿದಾನ: ನೈಸೀರಿಯ ಗಾನರೀಯೀ ಎಂಬ ಏಕಾಣುಜೀವಿಯೇ ಈ ರೋಗಕ್ಕೆ ಕಾರಣ ಎಂದು ಮೇಲೆ ಹೇಳಿದೆ. ಇದು ಗ್ರಾಮನ ವರ್ಣಪರೀಕ್ಷೆಗೆ ನಿಷೇಧಾರ್ಥಕ ಫಲಿತಾಂಶ ನೀಡುತ್ತದೆ. ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸಿದಾಗ ಒಂದೊಂದು ಸೂಕ್ಷ್ಮಜೀವಿಯೂ ಒಂದು ಜೋಡಿ ಅವರೆ ಬೀಜದಾಕಾರದ ರಚನೆಯಂತೆ ಕಾಣುತ್ತದೆ. ಇದನ್ನು ಏಕಾಣುಜೀವಿ ಪ್ರಯೋಗಶಾಲೆಯಲ್ಲಿ ಚಾಕಲೇಟ್ ಅಗಾರ್ ಎಂಬ ಮಾಧ್ಯಮದಲ್ಲಿ ಬೆಳೆಸಬಹುದು. ಜನನೇಂದ್ರಿಯಗಳಿಂದ ಸ್ರವಿಸುವ ಕೀವಿನಲ್ಲಿ ಅನೇಕ ಕ್ರಿಮಿಗಳಿರುವುದರಿಂದ ರೋಗ ಒಬ್ಬರಿಂದ ಇನ್ನೊಬ್ಬರಿಗೆ ಸಂಭೋಗದ ಕಾಲದಲ್ಲಿ ಹರಡುತ್ತದೆ. ಅಲ್ಲದೆ ಕೀವು ತಗಲಿದ ಕಕ್ಕಸಿನ ಪೀಠ, ಕೀವನ್ನು ಮುಟ್ಟಿದ ಬೆರಳು, ಕೀವನ್ನು ಒರಸಿದ ಬಟ್ಟೆ ಮುಂತಾದವುಗಳಿಂದ ಕನ್ಯೆಯರಿಗೆ ಮತ್ತು ಮಕ್ಕಳಿಗೆ ರೋಗ ಹರಡಬಹುದು. ಕ್ರಿಮಿ ದೇಹವನ್ನು ಹೊಕ್ಕ ಅನಂತರ 3 - 14 ದಿವಸಗಳಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

	ರೋಗಲಕ್ಷಣಗಳು: ಜನನೇಂದ್ರಿಯಗಳ ಒಳರಚನಾಕ್ರಮದ ವ್ಯತ್ಯಾಸದ ದೆಸೆಯಿಂದ ಇದರ ಲಕ್ಷಣಗಳು ಪುರುಷರಲ್ಲಿ ಮತ್ತು ಸ್ತ್ರೀಯರಲ್ಲಿ ಬೇರೆ ಬೇರೆಯಾಗಿರುತ್ತವೆ.

	ಪುರುಷ ಗಾನರೀಯ: 1000 - 1040 ಫ್ಯಾ. ವರೆಗೂ ಜ್ವರ ಬರುವುದು, ಆಗಾಗ್ಗೆ ಮೂತ್ರ ವಿಸರ್ಜಿಸುವುದು, ಮೂತ್ರವನ್ನು ವಿಸರ್ಜಿಸುವಾಗ ನೋವು, ಮೂತ್ರ ವಿಸರ್ಜನೆಯ ಅನಂತರ ಮತ್ತೊಮ್ಮೆ ಮೂತ್ರ ಮಾಡಬೇಕೆಂಬ ಇಚ್ಛೆ, ಮೂತ್ರನಾಳದಿಂದ ಕೀವು ಇಲ್ಲವೆ ರಕ್ತಮಿಶ್ರಿತವಾದ (ಹಳದಿ) ಕೀವು ಬೀಳುವುದು, ಮೊದಮೊದಲು ಮೂತ್ರದ ಜೊತೆಯಲ್ಲಿ ಹರಿದು ಬರುವ ಕೀವು ಅನಂತರ ಮೂತ್ರನಾಳದಲ್ಲಿ ಯಾವಾಗಲೂ ಸ್ರವಿಸುತ್ತಿರುವುದು, ಶುಕ್ಲಗ್ರಂಥಿಯಲ್ಲಿ ಕೀವು ಸಂಗ್ರಹಗೊಂಡು ಮೂತ್ರ ಬಾರದೆ ಹೊಟ್ಟೆ ನೋವುಂಟಾಗುವುದು - ಇವು ಕೆಲವು ಮುಖ್ಯ ಲಕ್ಷಣಗಳು. ಮೂತ್ರನಾಳದ ಹೊರ ಮತ್ತು ಒಳಭಾಗದಲ್ಲಿ ಗ್ರಂಥಿ ಮತ್ತು ಮೂಲೆಗಳಿದ್ದು ಗೊನೋರಿಯ ಕ್ರಿಮಿಗಳು ಗೂಡು ಕಟ್ಟಿ ಬೆಳೆಯಲು ಅನುಕೂಲವಿರುವುದರಿಂದ ಟೈಸನನ ಗ್ರಂಥಿ, ಲಿಟ್ಟರ್ ಗ್ರಂಥಿ, ಕೌಪರ್‍ಗ್ರಂಥಿ, ಶುಕ್ಲಗ್ರಂಥಿ ಮತ್ತು ಲ್ಯಾಕುನೇ ಮಾರ್ಗಾನಿಗಳಲ್ಲಿ ಉದ್ರೇಕವಾಗಿ ಗುಳ್ಳೇಗಳೇಳಬಹುದು. ಲಿಟ್ಟರ್ ಗ್ರಂಥಿ ಮತ್ತು ಲ್ಯಾಕುನೇ ಮಾರ್ಗಾನಿಗಳಲ್ಲಿ ಹಲವು ವೇಳೆ ಉರಿಯೂತವುಂಟಾಗಿ ಮೂತ್ರನಾಳವು ಸಂಕುಚಿತವಾಗಿ ಮೂತ್ರವಿಸರ್ಜನೆ ಕುಂಠಿತವಾಗುವುದುಂಟು. ಎಪಿಡಿಡೈಮಸ್, ವೃಷಣ ನಾಳ ಮತ್ತು ವೀರ್ಯ ಕೋಶಗಳಲ್ಲಿ ಉರಿಯೂತವಾಗಿ ರೋಗ ತೊಡಕುಗಳುಂಟಾಗಬಹುದು. ಎಪಿಡಿಡೈಮಸ್ ಉಬ್ಬಿ ಅಂಡಕೋಶದಲ್ಲಿ ತೀವ್ರ ನೋವು, ಜ್ವರ ಬರುತ್ತವೆ. ವೀರ್ಯ ಕೋಶದ ಉರಿಯೂತದಿಂದ ಮಲವಿಸರ್ಜನೆಗೆ ತೊಂದರೆ ಬರುತ್ತದೆ. ಸ್ಖಲನನಾಳದ ಸುತ್ತ ಬಾವುಂಟಾಗಿ ವೀರ್ಯ ಹೊರಬರಲು ಅಡ್ಡಿಯಾಗಿ ಪುರುಷರಲ್ಲಿ ಅನೇಕ ತೊಂದರೆಗಳಾಗಬಹುದು. ರಕ್ತಚಲನೆಯಿಂದ ಈ ಕ್ರಿಮಿ ದೇಹದ ಬೇರೆ ಬೇರೆ ಅಂಗಗಳಿಗೆ ಸಂಚರಿಸಿ ಕಣ್ಣು ಮತ್ತು ಕೀಲುಗಳಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ. ಕಣ್ಣಿನ ಪಾಪೆ ಮತ್ತು ಕನೀನಿಕೆಗಳಲ್ಲಿ ನೋವು, ಹುಣ್ಣು ಮತ್ತು ರಕ್ತಾವರೋಧ ಮುಂತಾದ ತೊಂದರೆಗಳುಂಟಾಗುತ್ತದೆ. ಮೊದಲು ದೇಹದ ಎಲ್ಲಾ ಕೀಲುಗಳಲ್ಲಿ ನೋವುಂಟಾಗಿ ಅನಂತರ ಯಾವುದಾದರೂ ಒಂದು ದೊಡ್ಡ ಕೀಲಿನಲ್ಲಿ ನೋವು ಬಾವುಗಳಾಗುತ್ತವೆ. ಸಾಮಾನ್ಯವಾಗಿ ಮೊಣಕಾಲಿನ ಕೀಲಿನಲ್ಲಿ ಕೀವು ಸಂಗ್ರಹಗೊಂಡು ನಡೆಯಲು ಬಾರದಂತಾಗುತ್ತದೆ. ಕೀಲು ಗಟ್ಟಿಯಾಗಿ ಮಡಚಲಾಗದಂತೆ ಇಲ್ಲವೆ ಮಡಚುವಾಗ ವಿಪರೀತ ನೋವು ಬರುವಂತೆ ಆಗುತ್ತದೆ.

	ಸ್ತ್ರೀ ಗಾನರೀಯ: ಸ್ತ್ರೀಯರಲ್ಲಿ ಈ ರೋಗ ಪುರುಷನಲ್ಲಿದ್ದಷ್ಟು ತೀವ್ರವಾಗಿರದೆ ಜನನೇಂದ್ರಿಯ ಮತ್ತು ಮೂತ್ರಾಂಗಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಮೂತ್ರನಾಳ, ಗರ್ಭಕೋಶಕಂಠ ಮತ್ತು ಭಗಗ್ರಂಥಿಗಳ ಮೇಲಿದ್ದ ಅಂಟು ಪೊರೆಯನ್ನು ಗಾನರೀಯ ಕ್ರಿಮಿ ಹೊಕ್ಕು ಅನೇಕ ರೀತಿಯ ಲಕ್ಷಣಗಳನ್ನು ಪ್ರದರ್ಶಿಸುತ್ತದೆ. ಪದೇ ಪದೇ ಮೂತ್ರವಿಸರ್ಜನೆ, ರಜಸ್ಸು ಚಕ್ರ ಬದಲಾಗುವಿಕೆ, ಒಂದು ಮಗುವಾದ ಬಳಿಕ ಬಂಜೆತನ ಮತ್ತು ಯೋನಿಯೊಳಗಿಂದ ಬಿಳಿಸ್ರಾವವಾಗುವುದು - ಇವು ಹೆಂಗಸರಲ್ಲಿ ಕಾಣಬರುವ ಮುಖ್ಯ ಲಕ್ಷಣಗಳು. ಇವೆಲ್ಲಕ್ಕಿಂತಲೂ ಮುಖ್ಯವಾಗಿ ರೋಗಿ ಅನಿಶ್ಚಿತ ಅಸ್ವಸ್ಥತೆಯಿಂದ ನರಳುತ್ತಾಳೆ. ಭಗೋಷ್ಠಗಳ ಬಾಯುವಿಕೆ, ಯೋನಿಯ ಹೊರಭಾಗದ ಮೂಲೆಯಲ್ಲಿ ಊರಿಯುತ, ಗರ್ಭಕೋಶ ಕಂಠದ ಮೇಲೆ ಗಾಯ ಮತ್ತು ಅದರ ದ್ವಾರ ತೆರೆದು ಬಿರಿತು ಕೀವು ಸ್ರವಿಸುವುದು ಇನ್ನಿತರ ಲಕ್ಷಣಗಳು. ಗರ್ಭಕೋಶಕಂಠದ ಅಂಟುಪೊರೆಯಲ್ಲಿ ಕ್ರಿಮಿಗಳು ಬಹಳ ಕಾಲ ಇರಬಹುದಾದ್ದರಿಂದ ಗಾನರೀಯ ಹೆಂಗಸರಲ್ಲಿ ದೀರ್ಘಕಾಲದ ರೋಗವಾಗುತ್ತದೆ. ಗರ್ಭಕೋಶ ಕಂಠನಾಳದಿಂದ ಅಂಡನಾಳವನ್ನು ಕ್ರಿಮಿ ಪ್ರವೇಶಿಸಿದಾಗ ಉರಿಯೂತ ಉಂಟಾಗಿ, ಅಂಡನಾಳ ಉಬ್ಬಿ ಹೊಟ್ಟೆನೋವು ಬರಬಹುದು. ಹೀಗೆ ಅನೇಕ ಸಲ ಉರಿಯೂತವಾಗಿ ಕೊನೆಗೆ ಅಂಡನಾಳ ಸಂಕುಚಿತವಾಗಬಹುದು. ಸಂಕುಚಿತವಾದರೆ ವೀರ್ಯಾಣು ಚಲಿಸಲು ಅಡ್ಡಿಯಾಗಿ ಗರ್ಭಧಾರಣೆಗೆ ಆತಂಕವಾಗಿ ಹೆಂಗಸು ಬಂಜೆಯಾಗಬಹುದು.

	ಎಳೆಗೂಸು ಮತ್ತು ಮಕ್ಕಳ ಗಾನರೀಯ: ಜನನ ಕಾಲದಲ್ಲಿ ತಾಯಿಯ ಯೋನಿಯಲ್ಲಿ ಸ್ರವಿಸುವ ಕೀವು ಶಿಶುವಿಗೆ ಕಣ್ಣಿಗೆ ತಗುಲಿದರೆ ಕಣ್ಣಿನ ಬಿಳಿಪೊರೆಯ ಉರಿಯೂತ ಉಂಟಾಗುತ್ತದೆ. ಇದರಿಂದ ಕುರುಡು ಸಂಭವಿಸಬಹುದು. ಮಗು ಹುಟ್ಟಿದ 21 ದಿವಸಗಳೊಳಗೆ ಕಣ್ಣಿಗೆ ಉರಿಯೂತವಾದರೆ ಸಾಮಾನ್ಯವಾಗಿ ಅದು ಗಾನರೀಯದಿಂದ ಉಂಟಾದುದು ಎಂದು ತಿಳಿಯಬಹುದು. ಕನ್ಯೆಯರ ಭಗೋಷ್ಠಗಳ ಮೇಲೆ ಇರುವ ಪೊರೆಯನ್ನು ಗಾನರೀಯ ಕ್ರಿಮಿ ಅತಿಸುಲಭವಾಗಿ ಆಕ್ರಮಿಸುತ್ತದೆ. ಭಗೋಷ್ಠ ಉರಿಯೂತ ಕನ್ಯೆಯರಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಲೈಂಗಿಕ ಅಕೃತ್ಯ ಮತ್ತು ಬಲತ್ಕಾರ ಸಂಪರ್ಕಗಳಿಂದ ಇದು ಉದ್ಭವಿಸುತ್ತದೆ. ಕೊನೆಯದಾಗಿ ಲೈಂಗಿಕ ವಿಕಾರಗಳಿಂದ ಎಂದರೆ ಗುದಲಿಂಗ ಸಂಪರ್ಕದಿಂದ ಗುದದಲ್ಲಿ ಗಾನರಿಯ ರೋಗ ಬರುತ್ತದೆ.

	ರೋಗವನ್ನು ಗುರುತಿಸುವ ವಿಧಾನ: ಕೀವನ್ನು ಗಾಜಿನ ಸ್ಲೈಡಿನ ಮೇಲೆ ಲೇಪಿಸಿ ಗ್ರಾಮನ ವರ್ಣೀಕರಣ ವಿಧಾನದಿಂದ ಬಣ್ಣಕೊಟ್ಟು ಕ್ರಿಮಿಯನ್ನು ಸೂಕ್ಷ್ಮದರ್ಶಕದಲ್ಲಿ ಗುರುತಿಸಬಹುದು. 1960ರಿಂದೀಚೆಗೆ ಕ್ರಿಮಿಯನ್ನು ಪತ್ತೆ ಹಚ್ಚಲು ಪ್ರತಿರೋಧಿ ಕಿರಣಸ್ಫುರಣ ಪರೀಕ್ಷೆ ಎಂಬುದನ್ನು ಬಳಸುತ್ತಿದ್ದಾರೆ.

	ಚಿಕಿತ್ಸೆ: ಪುರುಷನಲ್ಲಿ ರೋಗ ತೀವ್ರವಿದ್ದಾಗ ಪಿಎಎಮ್ ಚುಚ್ಚುಮದ್ದನ್ನು ಕೊಟ್ಟರೆ ಗುಣವಾಗುತ್ತದೆ. ದೀರ್ಘಕಾಲದ ರೋಗವಿದ್ದರೆ ದಿವಸವೂ 1 ಸಿಸಿ. ಯಂತೆ ನಾಲ್ಕು ದಿವಸ ಕೊಡಬೇಕು. ಹೆಂಗಸರಲ್ಲಿ ರೋಗವನ್ನು ಗುಣಪಡಿಸುವುದು ಬಹಳ ಕಷ್ಟ. ಪಿಎಎಮ್ ಅನ್ನು ಕೊಟ್ಟರೂ ರೋಗ ಗುಣವಾಗುವುದೆಂದು ಹೇಳಲಾಗದು. ಸ್ಟ್ರೆಪ್ಟೊಮೈಸಿನನ್ನು ದಿವಸಕ್ಕೆ 1 ಗ್ರಾಮಿನಂತೆ 5 ದಿವಸ ಚುಚ್ಚುಮದ್ದಾಗಿ ಕೊಡಬೇಕು. ಆದರೆ ಕ್ರಿಮಿ ಸ್ಟ್ರೆಪ್ಟೊಮೈಸಿನಿಗೆ ಪ್ರತಿರೋಧ ಶಕ್ತಿಯನ್ನು ವೃದ್ಧಿ ಮಾಡಿಕೊಳ್ಳಬಹುದಾದ್ದರಿಂದ ಅಕ್ರೊಮೈಸಿನ್ ಮುಂತಾದ ಜೀವಿರೋಧಕ ಮದ್ದುಗಳನ್ನು ದಿನಕ್ಕೆ 2 ಗ್ರಾಮಿನಂತೆ 1 ಇಲ್ಲವೆ 2 ದಿವಸ ಕೊಡಬೇಕು. ಹುಟ್ಟುವ ಎಲ್ಲ ಶಿಶುಗಳ ಕಣ್ಣಲ್ಲಿ ಸಿಲ್ವರ್ ನೈಟ್ರೇಟ್ ದ್ರಾವಣ ಇಲ್ಲವೆ ಪೆನಿಸಿಲಿನ್ ದ್ರಾವಣವನ್ನು ಹಾಕಬೇಕು. ಕಣ್ಣಿನ ಉರಿಯೂತವಿದ್ದರೆ ಪೆನಿಸಿಲಿನ್ ದ್ರಾವಣವನ್ನು ಕಣ್ಣುಗಳಲ್ಲಿ ಆಗಾಗ್ಗೆ ಹಾಕುತ್ತಿರಬೇಕು. ಮತ್ತು ಕೊನೆಯ ಪಕ್ಷ 2 ಲಕ್ಷ ಯೂನಿಟ್ ಪ್ರೋಕೇನ್ ಪೆನಿಸಿಲಿನ್ ಚುಚ್ಚುಮದ್ದನ್ನು ಪ್ರತಿದಿವಸ ಗುಣವಾಗುವವರೆಗೆ ಕೊಡಬೇಕು. ಭಗೋಷ್ಠ ಉರಿಯೂತವಿದ್ದರೆ ಪೆನಿಸಿಲಿನ್ ದ್ರಾವಣದಿಂದ ದಿವಸವೂ ತೊಳೆದು ಪಿಎಎಮ್ ನ್ನು ದಿನಕ್ಕೆ 1 ಸಿಸಿ, ಯಂತೆ ಗುಣವಾಗುವವರೆಗೆ ಕೊಡಬೇಕು. ಗುಣವಾದ ಮೇಲೂ ರೋಗಿಗಳನ್ನು 3 ರಿಂದ 6 ತಿಂಗಳವರೆಗೆ ಕಣ್ಗಾವಲಿನಲ್ಲಿಟ್ಟು ಸಂಪೂರ್ಣ ಚಿಕಿತ್ಸೆ ಕೊಡಬೇಕು.

	ರೋಗ ನಿರೋಧ: ಸಂಭೋಗವಾದ ಕೂಡಲೇ ಪಿಎಎಮ್ ಚುಚ್ಚುಮದ್ದನ್ನು ತೆಗೆದುಕೊಂಡರೆ ಇಲ್ಲವೆ ಸಂಭೋಗ ಕಾಲದಲ್ಲಿ ಲಿಂಗ ಕವಚ ಧರಿಸಿದ್ದರೆ ರೋಗ ಬರಲಾರದು. ಕನಿಷ್ಠ 2 ಲಕ್ಷ ಯೂನಿಟ್ ಪೆನಿಸಿಲಿನ್ ಉಳ್ಳ ಮಾತ್ರೆಯನ್ನು ಸಂಭೋಗದ ಮುಂಚೆ ಇಲ್ಲವೆ ಸಂಭೋಗದ ಅನಂತರ 15 ಗಂಟೆಯೊಳಗೆ ಸೇವಿಸಿದರೆ ರೋಗ ಬರುವ ಸಂಭವ ಕಡಿಮೆ.
(ಎನ್.ಕೆ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ